Thursday, July 29, 2010

ನಾನು ನನ್ನ ಮೊಬೈಲ್

ನಾನು ನನ್ನ ಅಚ್ಚು ಮೆಚ್ಚಿನ ಮೊಬೈಲ್ ಜೊತೆ ಕಳೆದ ಕೆಲವು ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನವೇ ಲೇಖನ..



ನನಗೆ ಕೆಲಸ ಸಿಕ್ಕಿ 6 ತಿಂಗಳ ಮೇಲಾಗಿತ್ತು.. ಇನ್ನೂ ನನ್ನ ಮೊಬೈಲ್ ಚೇಂಜ್ ಮಾಡಿಲ್ಲ ಅನ್ನೋ ಕೊರತೆ ನನ್ನ ಕಾಡ್ತಾ ಇತ್ತು. ಅದಕ್ಕೆ ಸರಿಯಾಗಿ ಯುನಿವೆರ್ಸೆಲ್ ನಲ್ಲಿ ಹಬ್ಬದ ಪ್ರಯುಕ್ತ ರಿಯಾಯಿತಿ ಹಾಕಿದ್ದರು, ತಡಮಾಡದೆ ಹೋಗಿ ಆಗ ಬಹಳ ಚಾಲ್ತಿಯಲ್ಲಿದ್ದ Sony Ericson W810i ಮೊಬೈಲ್ ಖರೀದಿಸಿದೆ.
ಮೊಬೈಲ್ ತಗೊಂಡ ಖುಷಿಯಲ್ಲಿ ಅಪ್ಪನಿಗೆ ಕಾಲ್ ಮಾಡಿ ಮೊಬೈಲ್ ತಗೊಂಡ ವಿಷ್ಯ ತಿಳಿಸಿದೆ. ಅವ್ರು ಏನು ಮೊಬೈಲ್ ಆದ್ರೂ ಸ್ವಲ್ಪ ವರ್ಷ ಬರುತ್ತಾ  ಅಂತ ಕೇಳಿದ್ರು .ನಂಗೆ ವಸ್ತುಗಳನ್ನ ಸರಿಯಾಗಿ ಇಟ್ಟುಕೊಳ್ಳುವುದಕ್ಕೆ  ಬರೋಲ್ಲ ಅನ್ನೋ ಸತ್ಯನ ಕೆದಕಿ ಕಿಚಾಯಿಸ್ತಿದ್ರು .. ನಾನೂ ಜೋಶ್ನಲ್ಲಿ 5 ವರ್ಷ ಗ್ಯಾರೆಂಟಿ ಅಂದೆ .
ಇದಾದ ನಂತರದ ವಾರಾಂತ್ಯದಲ್ಲಿ ಬೆಂಗಳೂರಿನಿಂದ  ರಾಜಹಂಸ ಬಸ್ ನಲ್ಲಿ ಕುಳಿತು ಊರಿಗೆ ಹೊರಟೆ . ಬಸ್ ಮಜೆಸ್ಟಿಕ್ ಹತ್ರ ಸಿಗ್ನಲ್ ನಲ್ಲಿ ನಿಂತಿತ್ತು , ನಾನು ಮೊಬೈಲಿನಲ್ಲಿ FM ಕೇಳ್ತಾ ಕೂತಿದ್ದೆ . ಆಕಸ್ಮಿಕವಾಗಿ ಒಂದು ಕೈ ಹೊರಗಿಂದ ಬಂದು ನನ್ನಿ ಕೈಲಿದ್ದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನ ನಡಿಸ್ತು ನನ್ನ ಅದೃಷ್ಟಕ್ಕೆ  ನಾನು ಮೊಬೈಲ್ ಗಟ್ಟಿ ಹಿಡಿದುಕೊಂಡಿದ್ದರಿಂದ ಕಸಿದು ಕೊಳ್ಳಲಿಕ್ಕೆ  ಆಗಿಲ್ಲ . ತಕ್ಷಣ ಕಿಟಕಿ ಹೊರಗೆ ತಲೆ ಹಾಕಿ ಕೈ ಹಾಕಿದ ಮನುಷ್ಯನಿಗಾಗಿ ಹುಡುಕಾಟ  ನಡೆಸಿದೆ . ಅವನಾಗಲೇ ಪರಾರಿಯಾಗಿ ಆಗಿತ್ತು .ಸಧ್ಯ ಮೊಬೈಲ್ ಅವನ ಕೈಗೆ ಸಿಗಲಿಲ್ಲ ಅಂತ ಸಮಾಧಾನ ಮಾಡ್ಕೊಂಡು ಕಿಟಕಿ ಬಾಗಿಲು ಹಾಕಿ ಸೀಟ್ಗೆ ತಲೆ ಆನಿಸಿದೆ.
ಇನ್ನೊಂದು ದಿನ ಮಳೆಗಾಲದಲ್ಲಿ ಆಫೀಸಿನಿಂದ ಬರುವಾಗ ಜೋರಾಗಿ ಮಳೆ ಶುರುವಾಯ್ತು . ನನಗೋ ಮಳೆಯಲ್ಲಿ ಬೈಕ್
  ಓಡಿಸುವ ಚಟ . ಮೊಬೈಲ್ ಜೇಬ್ನಲ್ಲಿ ಇದೆ ಅನ್ನೋದನ್ನ ಮರೆತು ಮಳೆಯಲ್ಲಿ ನೆನೆದುಕೊಂಡೇ ಮನೆಗೆ ಹೋದೆ . ಮನೆಗೆ  
ಹೋದಮೇಲೆ ನೋಡಿದರೆ ಮೊಬೈಲ್  ಸತ್ತು ಹೋಗಿದೆಸ್ವಿಚ್ ಆನ್ ಆಗ್ತಾನೆ ಇಲ್ಲ .. ನನ್ನ ನಾನೇ ಬೈದುಕೊಂಡು ಮೊಬೈಲ್ ಬ್ಯಾಟರಿ ತೆಗೆದು ಅಕ್ಕಿಯಲ್ಲಿ ಇಟ್ಟೆ . ಗಂಟೆಗೊಮ್ಮೆ ಅದನ್ನ ತೆಗೆದು ಮೊಬೈಲ್ ಗೆ  ಹಾಕಿ ಚೆಕ್ ಮಾಡ್ತಾ ಇದ್ದೆ . ಏನು ಉಪಯೋಗ ಆಗಿಲ್ಲ .. ಅಂದು ಅದೇ ಬೇಜಾರಿನಲ್ಲಿ ಮಲಗಿದೆ . ಮಾರನೇ ದಿನ ಬೆಳಿಗ್ಗೆ ಎದ್ದು ಮತ್ತೊಮ್ಮೆ ಚೆಕ್ ಮಾಡಿದೆ ಮೊಬೈಲ್ ಸ್ವಿಚ್ ಆನ್  ಆಗಿಬಿಟ್ಟಿತು !!.. ಎಲ್ಲಾ ವರ್ಕ್ ಆಗ್ತಾ ಇದೆಯಾ ಅಂತ ಪರೀಕ್ಷಿಸಿದೆ.ಎಲ್ಲವೂ ವರ್ಕ್ ಆಗ್ತಾ ಇದೆ !!!. ನನಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ . ಅಕ್ಕಿಯಲ್ಲಿ ಇಡೋ  ಐಡಿಯಾ ಕೊಟ್ಟ ಯಾರೋ ಪುಣ್ಯಾತ್ಮನಿಗೆ ಮನಸ್ಸಿನಲ್ಲಿಯೀ ಧನ್ಯವಾದ ಸಮರ್ಪಿಸಿದೆ . ಮೊದಲನೇ ಬಾರಿಗೆ ಫಾರ್ವರ್ಡ್ಡೆಡ್ ಮೇಲ್ ನನ್ನ ಉಪಯೋಗಕ್ಕೆ ಬಂದಿತ್ತು ..
ಮತ್ತೊಂದು ದಿನ ಸಂಜೆ ನಾನು ನನ್ನ ರೂಮ್ನಲ್ಲಿ ಟಿವಿ ನೋಡುತ್ತಾ ಕುಳಿತಿದ್ದೆ ನನ್ನ ತಮ್ಮ ಬಸ್ ನಿಲ್ದಾಣದಲ್ಲಿ  ಇದ್ದೇನೆ ನನ್ನ ಕರೆದುಕೊಂಡು ಹೋಗಲು ಬಾ ಅಂತ ಫೋನ್ ಮಾಡಿದ . ಮೊಬೈಲನ್ನು ಜೇಬಿಗೆ ತುರುಕಿಕೊಂಡು ಬೈಕ್ ನಲ್ಲಿ ಹೊರಟೆ . ಅವನನ್ನು ಕರೆದು ಕೊಂಡು ಬಂದು ಮನೆಯ ಮೆಟ್ಟಿಲೇರುವಾಗ ನನ್ನ ಜೇಬು ನೋಡಿಕೊಂಡೆ ಮೊಬೈಲ್ ಇಲ್ಲ ???.. ಮನೆಯಲ್ಲೇ ಇಟ್ಟಿದ್ದೇನೆ ಅಂದುಕೊಂಡು ಮನೆಯ ಒಳಗೆ ಹುಡುಕಾಡಿದೆ ಮೊಬೈಲ್ ಸಿಗ್ಲಿಲ್ಲ ... ತಮ್ಮನ ಮೊಬೈಲ್ ನಿಂದ ನನ್ನ ಮೊಬೈಲ್ ಗೆ ಕಾಲ್ ಮಾಡಿದೆ ರಿಂಗ್ ಆಗ್ತಾ ಇದೆ ಆದ್ರೆ ಫೋನ್ ಮನೇಲಿ  ಇಲ್ಲ .. ತಕ್ಷಣ   ಹೊಡುಕಿಕೊಂಡು  ಹೊರಟೆ  ಮನೆಯಿಂದ  ಸ್ವಲ್ಪ  ದೂರದಲ್ಲಿ  ರಸ್ತೆಯ  ಮಧ್ಯದಲ್ಲಿ  ಬೀದಿ  ದೀಪದ  ಕೆಳಗಡೆ  ನನ್ನ  ನಲುಮೆಯ  ಮೊಬೈಲ್  ಬಿದ್ದುಕೊಂಡಿತ್ತು .. !!! . ಅದು ಸ್ವಲ್ಪ ಬ್ಯುಸಿ ರೋಡ್ ವಾಹನಗಳ ಓಡಾಟ ತುಂಬಾ ಜಾಸ್ತಿ ಇಲ್ಲದಿದ್ದರೂ ಓಡಾಡುವವರು ಬಹಳ ಜನ . ಅಂತಹ ರೋಡ್ನ ಮಧ್ಯದಲ್ಲಿ ಸರಿ ಸುಮಾರು 20   ನಿಮಿಷಗಳ ವರೆಗೆ  ,ಬೀದಿದೀಪದ   ಕೆಳಗೆ  ಯಾವ  ವಾಹನದ  ಅಡಿಗೂ  ಆಗದೆ , ಯಾರ  ಕಣ್ಣಿಗೂ  ಬೀಳದೆ   ನನ್ನ  ಚಿನ್ನ   ಬಿದ್ದುಕೊಂಡಿತ್ತು .ನನ್ನ  ಅದೃಷ್ಟಕ್ಕೆ  ನಾನೇ  ಖುಷಿ ಪಟ್ಟುಕೊಂಡು   ಮನೆ  ಸೇರಿದೆ .
ಇನ್ನೊಮ್ಮೆ  ಮೆಕೆದಾಟುವಿಗೆ  ಟ್ರಿಪ್  ಗೆ  ನಾವು  ಗೆಳೆಯರೆಲ್ಲ  ಸೇರಿ  ಹೋಗಿದ್ದೆವು . ಅಲ್ಲಿ  ಫೋಟೋ  ತೆಗಿ  ಅಂತ   ವೇಣು  ಅವನ  ಮೊಬೈಲ್  ಕೊಟ್ಟ . ನಾನು  ಅವನ  ಫೋಟೋ  ತೆಗೆಯೋ  ಭರದಲ್ಲಿ  ನನ್ನ  ಜೇಬಿನಲ್ಲಿದ್ದ  ಮೊಬೈಲ್  ಮರೆತು  ನೀರಿಗೆ  ಧುಮುಕಿದೆ (ಬುದ್ದಿವಂತ ಮಹಾಶಯ ). 2 ನಿಮಿಷದ  ನಂತರ  ನನಗೆ  ಜ್ಞಾನೋದಯವಾಯ್ತು ಅಷ್ಟರಲ್ಲಾಗಲೇ   ನನ್ನ  ಮೊಬೈಲ್  ನೀರು  ಕೊಡಿದು  ಕೆಲಸ  ಮಾಡುವುದನ್ನು  ನಿಲ್ಲಿಸಿಯಾಗಿತ್ತು . ಮೊದಲೊಂದು  ಬಾರಿ  ಅನುಭವ  ಇದ್ದುದರಿಂದ  ಮೊದಲಿನಷ್ಟು   ಗಾಬರಿ  ಆಗಲಿಲ್ಲ . ಮನೆಗೆ  ಬಂದವನೇ  ಮತ್ತೊಮ್ಮೆ  ಅಕ್ಕಿಯ  ಮೊರೆ  ಹೋದೆ . ಮಾರನೆ  ದಿನ  ಬ್ಯಾಟರಿ  ಯನ್ನು  ಮೊಬೈಲ್  ಗೆ  ಹಾಕಿ  ಸ್ವಿಚ್  ಆನ್  ಮಾಡಿದೆ . ಸ್ವಿಚ್  ಆನ್  ಕೂಡ ಆಯ್ತು . ಅಕ್ಕಿಗೊಂದು  ಧನ್ಯವಾದ  ಅರ್ಪಿಸಿ  ಕಾಲ್  ಮಾಡಲು  ಟ್ರೈ  ಮಾಡಿದೆ . ಅಷ್ಟರಲ್ಲಿ ಮತ್ತೊಮ್ಮೆ  ಸ್ವಿಚ್  ಆಫ್   ಆಯ್ತು . ಮತ್ತೆ  ಆನ್  ಆಗಲೇ  ಇಲ್ಲ . ಇನ್ನೊಮ್ಮೆ  ಅಕ್ಕಿಯ  ಮೊರೆ  ಹೋದೆ  ಏನೂ  ಪ್ರಯೋಜನ  ವಾಗಲಿಲ್ಲ .ಗತಿ  ಇಲ್ಲದೆ  ಸರ್ವಿಸ್  ಸೆಂಟರ್  ಗೆ  ಕೊಟ್ಟೆ . ಅವನು  ಬ್ಯಾಟೆರಿ   ತೆಗೆದು  ಕೊಡುತ್ತ  ಸಾರ್ , ಮೊಬೈಲ್  ಗೆ  ನೀರು  ಹೋಗಿದೆ  ಹಾಗಾಗಿ  ವಾರೆನ್ಟಿ  ಏನೂ  ಬರುವುದಿಲ್ಲ  ಅಂದ . ರಿಪೈರ್   ಆಗುವ  ಸಾಧ್ಯತೆ  ಕೂಡ  50%  ಅಂದ . ನಾನಗೆ  ಫುಲ್  ಬೇಜಾರಾಗಿ  ಆದಿನ  ಕೆಲಸ  ಮಾಡಲು   ಸಾಧ್ಯ  ಆಗದೆ  ½ ದಿನ  ರಾಜ   ಹಾಕಿ  ಮನೆಗೆ  ಬಂದು  ನಿದ್ದೆ  ಮಾಡಿದೆ . ಮಾರನೆ  ದಿನ  ನಾನು  ಜಾತಕ ಪಕ್ಷಿಯಂತೆ   ಸರ್ವಿಸ್  ಸೆಂಟರ್  ನವನ  ಕಾಲ್ ಗೆ    ಕಾಯುತ್ತ  ಇದ್ದೆ , ಅಂತು  ಅವನ  ಫೋನ್  ಬಂತು .ಸಾರ್ , circuit   ಸುಟ್ಟು  ಹೋಗಿದೆ , IC  ಬರ್ನ್   ಆಗಿದೆ  ಅಂತೆಲ್ಲ  ಹೇಳಿ  ಕೊನೆಗೆ ರಿಪೈರ್    ಗೆ  2500/- ಆಗುತ್ತೆ  ಅಂದ .  ಹೋಸ್ಪಿಟಲ್  ಬಿಲ್  ಜಾಸ್ತಿ  ಅಂತ  ರೋಗಿಯನ್ನು  ಸಾಯಕ್ಕೆ  ಬಿಡಕ್ಕಗುತ್ಯೆ?. ನಾನೂ  ನನ್ನ  ಮೊಬೈಲ್ ನ್ನು  ಬದುಕಿಸಲು  ಪಣತೊಟ್ಟು  , ಸರ್ವಿಸ್  ಸೆಂಟರ್ ನವನಿಗೆ   ರಿಪೈರ್   ಮಾಡು  ಅಂದೆ . ನಂತರದ  2 ದಿನ  ಅವನ  ಫೋನ್  ಬರಲೇ  ಇಲ್ಲ . ಪಾರ್ಟ್ಸ್  ಸ್ಟಾಕ್  ಇಲ್ಲ.ಸರ್ವಿಸ್ ಬಾಯ್ ರಜ   ಅಂತೆಲ್ಲ  ಹೇಳಿ  ಒಂದು  ವಾರ  ಸತಾಯಿಸಿದ  ನಂತರ  ಒಂದು  ಒಳ್ಳೆಯ  ದಿನ  ಕಾಲ್  ಮಾಡಿ  ನಿಮ್ಮ  ಮೊಬೈಲ್  ರಿಪೈರ್     ಆಗಿದೆ  ಅಂದ .ಅಂತು ಬದುಕಿದೆಯ ನನ್ನ ಗೆಳೆಯ ಅಂದುಕೊಂಡು ಆದಿನ   ಮಧ್ಯಾನ್ನವೆ    ಸರ್ವಿಸ್  ಸೆಂಟರ್ಗೆ  ಓಡಿದೆ . ಅಲ್ಲಿ  ಅವನು  ನನಗೆ ಮೊಬೈಲ್ ವರ್ಕ್ ಆಗ್ತಾ ಇದೆ ಅಂತ ತೋರಿಸಲು ಬ್ಯಾಟರಿ ಹಾಕಿದ. ಮೊಬೈಲ್ ಆನ್ ಆಗಲೇ ಇಲ್ಲ. ನಾನು ಗಾಬರಿ , ಅವನೂ ಕೂಡ . ಅವನೆಷ್ಟೇ  ಪ್ರಯತ್ನ ಮಾಡಿದರು ಮೊಬೈಲ್ ಮಾತ್ರ ಮಾತನಾಡಲೇ ಇಲ್ಲ. ಅವನೂ ಕೈ ಚೆಲ್ಲಿದ. ನನ್ನ  ಸಂತೋಷ  ಸಂಭ್ರಮ  ಎಲ್ಲ  ಟುಸ್ ಪಟಾಕಿ ಆಗಿ ಹೋಯ್ತು. ಸ್ವಲ್ಪ    ಹೊತ್ತು  ಅವರೊಡನೆ  ಜಗಳ  ಆಡಿದೆ . ಏನು  ಉಪಯೋಗ  ಆಗಲಿಲ್ಲ . ಹಾಳಾದ  ನನ್ನ  ಮೊಬೈಲ್ ನ್ನು   ತೆಗೆದುಕೊಂಡು  ಮನೆಗೆ  ಹೋದೆ . ಇಷ್ಟಪಟ್ಟು    ತೆಗೆದುಕೊಂಡ  ಮೊಬೈಲ್  ವರ್ಷ  ಕಳೆಯೋದರ  ಒಳಗೆ  ಪ್ರಾಣ ಬಿಟ್ಟಿತ್ತು  .ಅಪ್ಪನ ವಾಕ್ಯ ನನ್ನ ಹಂಗಿಸುತ್ತ ಇತ್ತು.
ಅದೇ  ಬೇಜಾರಿನಲ್ಲಿ  ಮೊಬೈಲ್ ಗೆ   ಅದರ  ಬ್ಯಾಟರಿ  ಹಾಕಿ  ಸ್ವಿಚ್  ಆನ್  ಮಾಡಲು  ಪ್ರಯತ್ನಿಸಿದೆ . ಸ್ವಿಚ್ ಆನ್    ಆಗಿಬಿಟ್ಟಿತು .. !!!!!!! ತಕ್ಷಣ  ನಾನು  ಕಾಲ್  ಮಾಡಲು  ಪ್ರಯತ್ನಿಸಿದೆ . ಮನೆ  ಲ್ಯಾಂಡ್ ಲೈನ್   ನಿಂದ  ನನ್ನ  ಮೊಬೈಲ್ ಗೆ   ಕಾಲ್  ಮಾಡಿದೆ  .. ಎಲ್ಲವೂ  ವರ್ಕ್  ಆಗ್ತಾ  ಇದೆ …(ಸರ್ವಿಸ್ ಸೆಂಟರ್ ನವನು ಆನ್ ಮಾಡಿದಾಗ ಯಾಕೆ ಆಗಲಿಲ್ಲ ಅನ್ನುವುದು ನನಗಿನ್ನೂ ಯಕ್ಷ  ಪ್ರಶ್ನೆ.ನನಗದರ ಉತ್ತರ ಬೇಕಾಗಿಲ್ಲ ಅನ್ನಿ.ನನ್ನ ಅನಿಸಿಕೆ ಪ್ರಕಾರ ಅವನ ಬ್ಯಾಟರಿ ಯಲ್ಲೇ  ಚಾರ್ಜ್ ಇರಲಿಲ್ಲ ಅನ್ಸುತ್ತೆ.. :) ) ನನಗಾದ  ಸಂತೋಷಕ್ಕೆ  ಏನೂ  ಮಾಡಬೇಕೋ  ಗೊತ್ತಾಗಿಲ್ಲ .. ರೂಮ್ನಲ್ಲೇ  ಕುಣಿದಾಡಿದೆ  ..ಸರ್ವಿಸ್  ಸೆಂಟರ್ ನವನು   ಪುಕ್ಕಟೆಯಾಗಿ  ನನಗೆ  ನನ್ನ  ಮೊಬೈಲ್  ರಿಪೈರ್   ಮಾಡಿಕೊಟ್ಟಿದ್ದ . ಇನ್ನೊಂದು  ಸಲ  ಎಲ್ಲವೂ  ವರ್ಕ್  ಆಗ್ತಾ  ಇದೆಯಾ  ಅಂತ  ಪರೀಕ್ಷೆ    ಮಾಡಿದೆ , ಮೆಮೊರಿ  ಕಾರ್ಡ್  ರೀಡ್   ಆಗ್ತಾ  ಇರಲಿಲ್ಲ  ಅದನ್ನು  ತೆಗೆದುಕೊಂಡು  ಇನ್ನೊಂದು  ಸರ್ವಿಸ್  ಸೆಂಟರ್ಗೆ  ಹೋದೆ( ಮನುಷ್ಯನ ಅತಿ ಆಸೆ ನೋಡಿ)   ಅವನೂ  ಸಾರ್  ಇದು  ವರ್ಕ್  ಆಗ್ತಿರೋದೆ   ಗ್ರೇಟ್ . . ಇದನ್ನು  ರಿಪೈರ್    ಮಾಡಕ್ಕಾಗೋಲ್ಲ  ಅಂದು  ಬಿಟ್ಟ .
ಆದರೆ  ಅದೇ  ಕೊನೆ , ಅದಾದಮೇಲೆ ಇನ್ನು  ವರೆಗೂ  ನನ್ನ  ಮೊಬೈಲ್  ನನಗೆ  ಬೇರಾವ  ತೊಂದರೆಯನ್ನು  ಕೊಟ್ಟಿಲ್ಲ .ಈ  ನನ್ನ  ಮೊಬೈಲ್  ಮುಂದಿನ ತಿಂಗಳು ೪ ನೆ  ವರ್ಷಕ್ಕೆ  ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ನನ್ನ ಎಲ್ಲ ಸಂಭಾಷಣೆಗೆ  ಸಾಕ್ಷಿ ಆದ ಮೊಬೈಲ್ ಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.